ಭ್ರೂಣವಿಜ್ಞಾನ

	ಭ್ರೂಣ (ಎಂಬ್ರಿಯೊ), (ವಯಸ್ಕ ಪ್ರಾಣಿಯನ್ನು/ ಮಾನವನನ್ನು ಹೋಲುವ ಮರಿಯಾಗಿ/ಶಿಶುವಾಗಿ ಹುಟ್ಟುವುದಕ್ಕೆ ಅಥವಾ ಮೊಟ್ಟೆಯಿಂದ ಹೊರಬರುವುದಕ್ಕೆ ಮೊದಲು ಅಭಿವರ್ಧನೆಯ ಯಾವುದೆ ಹಂತದಲ್ಲಿರುವ ಸಂತತಿ) ವಯಸ್ಕ ಪ್ರಾಣಿಯಾಗಿ ರೂಪುಗೊಳ್ಳುವಾಗ ಅದು ತೋರುವ ಅಭಿವರ್ಧನೆ ಮತ್ತು ಬೆಳೆವಣಿಗೆಗಳ ಅಧ್ಯಯನ (ಎಂಬ್ರಿಯಾಲಜಿ). ಪ್ರತಿಯೊಂದು ಭ್ರೂಣವೂ ಯುಗ್ಮಕ (ಜೈಗೋಟ್) ಅಥವಾ ನಿಷೇಚಿತ ಅಂಡವಾಗಿ (ಫಟಿಲೈಸ್ಡ್ ಎಗ್) ತನ್ನ ಬೆಳೆವಣಿಗೆಯನ್ನು ಪ್ರಾರಂಭಿಸುತ್ತದೆ. ಬೇರೊಂದು ರೀತಿ ಹೇಳಬಹುದಾದರೆ ಯಾವುದೇ ಜೀವಿಯ ಬೆಳೆವಣಿಗೆಯ ಮೊದಲ ಹಂತಗಳ ಅಭ್ಯಾಸವೇ ಭ್ರೂಣವಿe್ಞÁನ.

	ಅಭಿವರ್ಧನೆ ಮತ್ತು ಬೆಳೆವಣಿಗೆಗಳ ಅರ್ಥ ಸಾಂದರ್ಭಿಕವಾಗಿ ಬದಲಾಗುವುದುಂಟು.

	ಜೀವಶಾಸ್ತ್ರದಲ್ಲಿ ಬೆಳೆವಣಿಗೆ ಎಂಬ ಪದವನ್ನು ಎರಡು ಅರ್ಥಗಳಲ್ಲಿ ಬಳಸುತ್ತಾರೆ. ನಿಷೇಚಿತ ಅಂಡ ಪ್ರಬುದ್ದ ಪ್ರಾಣಿಯಾಗಿ ಪರಿವರ್ತನೆಗೊಳ್ಳುವ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಎಲ್ಲ ಕ್ರಿಯಾವಿಶೇಷಗಳನ್ನು ಇಲ್ಲವೆ ಭೂಮಿಯ ಮೇಲೆ ಆದಿಯಲ್ಲಿ ಕಾಣಿಸಿಕೊಂಡ ಸರಳಜೀವಿಗಳು ಕ್ರಮೇಣ ಜಟಿಲಪ್ರಾಣಿಗಳಾಗಿ ವಿಕಾಸಗೊಂಡು ಇಂದಿನ ವೈವಿಧ್ಯಮಯ ಜೀವಕೋಟಿಯಾಗಿ ಪರಿವರ್ತನೆಗೊಂಡಿರುವ ಕ್ರಿಯಾವಿಶೇಷಗಳನ್ನು ಇದು ಸೂಚಿಸಬಹುದು. ಆದರೆ ಭ್ರೂಣ ವಿe್ಞÁನದಲ್ಲಿ ಮೊದಲನೆಯ ಅರ್ಥಕ್ಕೆ ಪ್ರಾಶಸ್ತ್ಯ.

	ಹೊಸಜೀವಿಯ ಬೆಳೆವಣಿಗೆಗೆ ಪೂರಕವಾದ ಪ್ರಕ್ರಿಯೆಗಳು ವಾಸ್ತವವಾಗಿ ಅಂಡದ ನಿಷೇಚನಕ್ಕೂ ಮೊದಲೇ ಆರಂಭವಾಗುತ್ತವೆ. ಏಕೆಂದರೆ ಲಿಂಗಾಣುಗಳ ಉತ್ಪತ್ತಿ ಮತ್ತು ಪಕ್ವತೆಗಳು ಮುಂದಿನ ಬೆಳೆವಣಿಗೆಗೆ ಪೂರಕವಾದ ಪರಿಸ್ಥಿತಿಯನ್ನು ಏರ್ಪಡಿಸುವುವು. ಲಿಂಗಾಣುಗಳ ಉತ್ಪತ್ತಿಯ ಕಾಲದಲ್ಲಿ ಮಯಾಸಿಸ್ ಕೋಶವಿಭಜನೆ ನಡೆದು ಹ್ಯಾಪ್ಲಾಯಿಡ್ ಸಂಖ್ಯೆಯ ಕ್ರೋಮೊಸೋಮುಗಳನ್ನುಳ್ಳ ರೇತ್ರಾಣು ಮತ್ತು ಅಂಡಾಣುಗಳು ರೂಪುಗೊಳ್ಳುವುವು. ಅನಂತರ ಈ ಲಿಂಗಾಣುಗಳ ಸಂಯೋಗದಿಂದ ಯುಗ್ಮಕ ರೂಪುಗೊಂಡು ವಾಸ್ತವ ಬೆಳೆವಣಿಗೆ ಆರಂಭವಾಗುತ್ತದೆ. ಗಂಡುಲಿಂಗಾಣು ನಿಷೇಚನೆಯ ಮೂಲಕ ಹೆಣ್ಣು ಲಿಂಗಾಣುವಿಗೆ ಕ್ರಿಯಾಶಕ್ತಿಯನ್ನು ಒದಗಿಸುವುದರ ಜೊತೆಗೆ ಪಿತೃವಿನ ಕಡೆಯಿಂದ ಬಂದ ಕ್ರೋಮೊಸೋಮು ಸಂಖ್ಯೆಯನ್ನೂ ಸೇರಿಸಿ ಡಿಪ್ಲಾಯಿಡ್ ಸಂಖ್ಯೆಯ ಪುನಃಸ್ಥಾಪನೆಗೆ ಕಾರಣವಾಗುತ್ತದೆ.

	ನಿಷೇಚಿತ ಅಂಡಾಣು ಕೆಲವು ವ್ಯತ್ಯಾಸಗಳ ವಿನಹ ಉಳಿದೆಲ್ಲ ಲಕ್ಷಣಗಳಲ್ಲಿ ಒಂದು ಸಾಮಾನ್ಯ ಜೀವಕೋಶವನ್ನು ಹೋಲುತ್ತದೆ; ಮುಂದಿನ ಬೆಳೆವಣಿಗೆಯ ಕಾಲಕ್ಕೆ ಅಗತ್ಯವಾದ ವಸ್ತುಗಳ ಪೂರೈಕೆಗಾಗಿ ಸಂಗ್ರಹಗೊಂಡಿರುವ ಆಹಾರ ಪದಾರ್ಥಗಳನ್ನು ಬಿಟ್ಟರೆ, ಇದರಲ್ಲಿ ಒಂದು ನ್ಯೂಕ್ಲಿಯಸ್ ಮತ್ತು ಕೊಂಚ ಮೊತ್ತದ ಕೋಶದ್ರವ್ಯ ಇರುತ್ತದೆ. ಅಂಡದಲ್ಲಿ ಸಂಗ್ರಹವಾಗುವ ಬಂಡಾರ (ಯೋಕ್) ಮುಂತಾದ ಆಹಾರ ಪದಾರ್ಥಗಳ ಇರುವಿಕೆ ಮತ್ತು ಅದು ಹರಡಿರುವ ರೀತಿ ಅಂಡದ ಮುಂದಿನ ಬೆಳೆವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಒಂದು ಒಂಟಿ ಜೀವಕೋಶವಾದ ಅಂಡದಿಂದ ಜಟಿಲವಾದ ಬಹುಕೋಶಜೀವಿಯೊಂದು ಬೆಳೆಯಬೇಕಾದರೆ ಅನೇಕ ಜೀವಕೋಶಗಳ ಉತ್ಪಾದನೆಯಾಗಬೇಕು, ಆದ್ದರಿಂದ ನಿಷೇಚಿತ ಅಂಡ ಅನೇಕ ಬಾರಿ ಮೈಟಾಸಿಸ್ ರೀತಿಯಲ್ಲಿ ವಿಭಜಿಸಿ ಸಣ್ಣಗಾತ್ರದ ಅನೇಕ ಜೀವಕೋಶಗಳನ್ನು ಉತ್ಪತ್ತಿಮಾಡುತ್ತದೆ. ಬೆಳವಣಿಗೆಯ ಈ ಹಂತಕ್ಕೆ ವಿದಲನ (ಫಿಶನ್) ಎಂದು ಹೆಸರು. ಈ ಕಾಲದಲ್ಲಿ ಭ್ರೂಣದ ಗಾತ್ರದಲ್ಲಿ ಬದಲಾವಣೆಯಾಗುವುದಿಲ್ಲ. ವಿದಲನದಿಂದ ಉತ್ಪತ್ತಿಯಾಗುವ ಜೀವಕೋಶಗಳಿಗೆ ವಿದಲನಕೋಶಗಳು ಅಥವಾ ಬ್ಲಾಸ್ಟೊಮಿಯರ್‍ಗಳೆಂದು ಹೆಸರು. ಇವು ಆಯಾ ಪ್ರಭೇದಕ್ಕೆ ಅನುಗುಣವಾಗಿ ಬೆಳೆವಣಿಗೆಯ ಮುಂದಿನ ಹಂತಕ್ಕೆ ಅನುವಾಗುವಂತೆ ವ್ಯವಸ್ಥೆಗೊಳ್ಳುತ್ತವೆ. ಈ ಸಿದ್ಧತೆಗೆ ಬ್ಲಾಸ್ಟುಲಿಕರಣ ಎಂದು ಹೆಸರು. ತತ್ಫಲವಾಗಿ ರೂಪುಗೊಳ್ಳುವ ರಚನೆ ಬ್ಲಾಸ್ಟುಲ. ಪ್ರಾಣಿಗುಂಪಿನ ವಿವಿಧ ಪಂಗಡಗಳನ್ನು ಪರಿಶೀಲಿಸಿದಾಗ, ಅಂಡದ ರಚನೆಗೆ ಅನುಗುಣವಾಗಿ ಹಾಗೂ ಅದರಲ್ಲಿ ಇರುವ ಬಂಡಾರದ ಮೊತ್ತವನ್ನು ಅನುಸರಿಸಿ ವಿವಿಧ ರೀತಿಯ ಬ್ಲಾಸ್ಟುಲಗಳಿರುವುದು ವ್ಯಕ್ತವಾಗುತ್ತದೆ. ಹೆಚ್ಚು ಬಂಡಾರ ಇಲ್ಲ (ಉದಾ: ಕಡಲಿನ ಅನೇಕ ಅಕಶೇರುಕ ಪ್ರಾಣಿಗಳು) ಅಂಡಗಳು ಬೆಳೆದು ಟೊಳ್ಳಾದ ಚೆಂಡಿನಂತಿರುವ ಬ್ಲಾಸ್ಟುಲ ನಿರ್ಮಾಣವಾಗುತ್ತದೆ. ಇದರ ಒಳಗಿನ ಅವಕಾಶಕ್ಕೆ ಬ್ಲಾಸ್ಟೊಸೀಲ್ ಎಂದು ಹೆಸರು. ಸ್ವಲ್ಪ ಹೆಚ್ಚು ಮೊತ್ತದ ಬಂಡಾರ ಇರುವ ತತ್ತಿಗಳಲ್ಲಿ (ಉದಾ: ಕಪ್ಪೆಯ ತತ್ತಿಗಳು) ವಿದಲನ ಪೂರ್ಣವಾದರೂ ನಡುವೆ ಇರಬೇಕಾದ ಬ್ಲಾಸ್ಟೊಸೀಲ್ ಅವಕಾಶ ಕೇಂದ್ರಸ್ಥಾನದಿಂದ ಪಲ್ಲಟಗೊಂಡು ಪ್ರಾಣಿಧ್ರುವದ (ಅನಿಮಲ್ ಪೋಲ್) ಕಡೆಗೆ ಇರುತ್ತದೆ. ಇವುಗಳಲ್ಲಿ ಗಮನಿಸಬಹುದಾದ ಮತ್ತೊಂದು ಮುಖ್ಯ ಅಂಶ ಎಂದರೆ, ಅಂಡದಲ್ಲಿರುವ ಬಂಡಾರ ಎಲ್ಲ ಜೀವಕೋಶಗಳಿಗೂ ಸಮನಾಗಿ ಹಂಚಿಹೋಗದೆ ಕಾಯಧ್ರುವದ (ವೆಜಿಟಲ್ ಪೋಲ್) ಕಡೆಗಿರುವ ಜೀವಕೋಶಗಳಿಗೆ ಸೀಮಿತವಾಗಿರುತ್ತದೆ. ಬಂಡಾರವನ್ನುಳ್ಳ ಬ್ಲಾಸ್ಟೊಮಿಯರುಗಳು ಬಂಡಾರವಿಲ್ಲದ ಬ್ಲಾಸ್ಟೊಮಿಯರ್‍ಗಳೊಂದಿಗೆ ವಿದಲನೆಯ ವೇಗದಲ್ಲಿ ಸ್ಪರ್ಧಿಸಲಾರದೆ, ಅವುಗಳ ವಿಭಜನೆ ನಿಧಾನವಾಗುತ್ತದೆ. ಆದ್ದರಿಂದ ಪ್ರಾಣಿಧ್ರುವದ ಕಡೆಗಿರುವ ಬಂಡಾರರಹಿತ ಜೀವಕೋಶಗಳು ಸಣ್ಣವೂ ಕಾಯಧ್ರುವದ ಕಡೆಗಿರುವ ಬಂಡಾರಸಹಿತ ಜೀವಕೋಶಗಳು ದೊಡ್ಡವೂ ಆಗಿವೆ. ಇವಕ್ಕೆ ಅನುಕ್ರಮವಾಗಿ ಮೈಕ್ರೊಮಿಯರ್ ಮತ್ತು ಮ್ಯಕ್ರೊಮಿಯರ್‍ಗಳೆಂದು ಹೆಸರು. ಅತ್ಯಂತ ಅಧಿಕ ಮೊತ್ತದ ಬಂಡಾರವನ್ನುಳ್ಳ ಸರೀಸೃಪಗಳ, ಪಕ್ಷಿಗಳ ಮತ್ತು ಮೂಳೆಮೀನುಗಳ ಅಂಡಗಳು ವಿದಲನ ಕಾಲಕ್ಕೆ ಪೂರ್ಣವಾಗಿ ವಿಭಾಗವಾಗವು. ಕೋಶದ್ರವ್ಯವಿರಬಹುದಾದ ಮೇಲುಭಾಗಕ್ಕೆ ಮಾತ್ರ ಸೀಮಿತವಾದ ವಿಭಜನೆಗೆ ಇವು ಒಳಗಾಗುವುದರಿಂದ ತಟ್ಟೆಯಾಕಾರದ ಜೀವಕೋಶಫಲಕವೊಂದು ರೂಪುಗೊಳ್ಳುತ್ತದೆ. ಈ ಬ್ಲಾಸ್ಟುಲಕ್ಕೆ ಬ್ಲಾಸ್ಟೊಡಿಕ್ಕ್ ಎಂದು ಹೆಸರು. ಬಂಡಾರವನ್ನೇ ಪಡೆದಿರದೆ ತಾಯಿಯ ದೇಹದ ಒಳಗೆ ಗರ್ಭಕೋಶ ಭಿತ್ತಿಗೆ ಅಂಟಿಕೊಂಡು ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವ ಸ್ತನಿಗಳ ಅಂಡದ ಬೆಳೆವಣಿಗೆಯಲ್ಲಿ ಸಂಚಿಯಾಕಾರದ ಬ್ಲಾಸ್ಟುಲ ರೂಪುಗೊಳ್ಳುತ್ತದೆ. ಇದಕ್ಕೆ ಬ್ಲಾಸ್ಟೊಸಿಸ್ಟ್ ಎಂದು ಹೆಸರು. ಬಂಡಾರ ಮತ್ತು ಇನ್ನಿತರ ಆಹಾರಪದಾರ್ಥಗಳು ಅಂಡದಲ್ಲಿ ಸಂಗ್ರಹವಾಗುವುದು ಅಥವಾ ಸಂಗ್ರಹವಾಗದಿರುವುದು ಆ ಪ್ರಾಣಿಯ ಅಂಡ ಬೆಳೆಯುವ ಪರಿಸರವನ್ನು ಅವಲಂಬಿಸಿರುತ್ತದೆ. ಬಾಸ್ಟುಲ ಹಂತದಲ್ಲಿ ಯಾವ ವ್ಯವಸ್ಥೆಗೂ ಒಳಪಡದೆ ಹರಿದು ಹಂಚಿಹೋಗಿರುವ ವಿವಿಧ ರೀತಿಯ ಜೀವಕೋಶಗಳು ತಮ್ಮ ಮುಂದಿನ ಮಾರ್ಗಕ್ಕೆ ಅನುಗುಣವಾಗಿ ಬೆಳೆಯಬೇಕಾಗದರೆ, ಒಂದೇ ಗುಂಪಿನ ಜೀವಕೋಶಗಳು ಒಂದೆಡೆ ಕಲೆಯಬೇಕಾದುದು ಮತ್ತು ತಮ್ಮ ಮುಂದಿನ ಬೆಳೆವಣಿಗೆಗೆ ಅನುವಾಗುವಂತೆ ಅಂಡದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಸೇರಬೇಕಾದುದು ಅಗತ್ಯ. ಈ ಅಗತ್ಯಗಳನ್ನು ಬೆಳೆವಣಿಗೆಯ ಮುಂದಿನ ಹಂತವಾದ ಗ್ಯಾಸ್ಟ್ರುಲೀಕರಣ ಪೂರೈಸುತ್ತದೆ. ಒಂದು ಪದರ ಜೀವಕೋಶವನ್ನುಳ್ಳ ಬ್ಲಾಸ್ಟುಲ ಎರಡು ಅಥವಾ ಹೆಚ್ಚು ಪದರಗಳನ್ನು ಹೊಂದಿದ ಗ್ಯಾಸ್ಟ್ರುಲವಾಗಿ ಈ ಹಂತದಲ್ಲಿ ರೂಪುಗೊಳ್ಳುತ್ತದೆ. ಗ್ಯಾಸ್ಟ್ರುಲೀಕರಣ ಪ್ರಕ್ರಿಯೆ ಎರಡು ರೀತಿಯಲ್ಲಿ ನಡೆಯಬಹುದು. ಟೊಳ್ಳಾದ ಚೆಂಡಿನ ರೂಪದಲ್ಲಿರುವ ಬ್ಲಾಸ್ಟುಲ, ಒಂದು ತುದಿಯಲ್ಲಿ ಮಡಿಚಿಕೊಂಡು, ಇಪ್ಪದರದ ಗ್ಯಾಸ್ಟ್ರುಲ ಆಗಿ ಮಾರ್ಪಡಬಹುದು. ಈಗ ಇದರ ಆಕಾರ ಎರಡು ಪದರದ ಬಟ್ಟಲಿನಂತಿರುತ್ತದೆ. ಈ ಬಟ್ಟಲಿನ ಒಳಗಿನ ಅವಕಾಶವೇ ಗ್ಯಾಸ್ಟ್ರೊಸೀಲ್. ಇದರ ಬಾಯಿ ಬ್ಲಾಸ್ಟೊಪೋರ್. ಹೀಗೆ ಬ್ಲಾಸ್ಟುಲದ ಒಂದು ತುದಿ ಮಡಿಚಿಕೊಳ್ಳುವುದಕ್ಕೆ ಅಂತರ್ವಲನ ಎಂದು ಹೆಸರು. ಇನ್ನೊಂದು ರೀತಿಯ ಗ್ಯಾಸ್ಟ್ರುಲೀಕರಣದಲ್ಲಿ ಬ್ಯಾಸ್ಟುಲದ ಹೊರಗಿನ ಪದರದ ಹೊಸ ಭಾಗಗಳು ಅಂಕುರಗೊಂಡು ಮೇಲಿನ ಪದರದ ಕೆಳಗಡೆ ಎರಡನೆಯ ಪದರವಾಗಿ ವ್ಯವಸ್ಥೆಗೊಂಡು ಗ್ಯಾಸ್ಟ್ರುಲ ರೂಪುಗೊಳ್ಳಬಹುದು. ಇದಕ್ಕೆ ಸ್ತರಸಂಯೋಜನೆ ಎಂದು ಹೆಸರು. ಮುಖ್ಯವಾಗಿ ಇದು ನಡೆಯುವುದು ಕೋಶಗಳ ಚಲನೆ ಅಥವಾ ವಲಸೆಯಿಂದ (ಮೈಗ್ರೇಷನ್).

	ಗ್ಯಾಸ್ಟ್ರುಲೀಕರಣದ ಪರಿಣಾಮವಾಗಿ ಕಶೇರುಕ ಬ್ಲಾಸ್ಟುಲ ಪದರಗಳುಳ್ಳ ಗ್ಯಾಸ್ಟ್ರುಲವಾಗಿ ಪರಿವರ್ತನೆಗೊಳ್ಳುತ್ತದೆ. ಹೊರಚರ್ಮ (ಎಕ್ಟೊಡರ್ಮ್), ಒಳಚರ್ಮ (ಎಂಡೊಡರ್ಮ್) ಮತ್ತು ನಡುಚರ್ಮ (ಮೀಸೊಡರ್ಮ್) ಎಂಬ ಮೂರು ಮೂಲ ಪದರಗಳು ಈ ಹಂತದಲ್ಲಿ ರೂಪುಗೊಳ್ಳುವುವು. ಭ್ರೂಣದ ಹೊರಮೇಲ್ಮೈಯಿಂದ ಜೀವಕೋಶಗಳು ಒಳಗಡೆಗೆ ಚಲಿಸಿ ಗ್ಯಾಸ್ಟ್ರುಲೀಕರಣ ನಡೆಯುತ್ತದೆ. ತತ್ಫಲವಾಗಿ ಬ್ಲಾಸ್ಟೊಸೀಲ್ ಅವಕಾಶ ಅಳಿಸಿಹೋಗಿ ಅದರ ಜಾಗದಲ್ಲಿ ಗ್ಯಾಸ್ಟ್ರೊಸೀಲ್ ಅಥವಾ ಆರ್ಕೆಂಟಿರಾನ್ ಎಂಬ ಹೊಸ ಅವಕಾಶ ಕಾಣಿಸಿಕೊಳ್ಳುತ್ತದೆ.

	ಗ್ಯಾಸ್ಟ್ರುಲೀಕರಣದ ವಿಶೇಷ ಲಕ್ಷಣವಾದ ಕೋಶವಲಸೆಗಳ ಕಾಲದಲ್ಲಿ ಸರಳ ಬ್ಲಾಸ್ಟುಲಕ್ಕೂ ಮತ್ತು ಜಟಿಲ ಗ್ಯಾಸ್ಟ್ರುಲಕ್ಕೂ ನಡುವೆ ಇಪ್ಪದರದ ಹಂತ ಕಾಣಿಸಿಕೊಳ್ಳುತ್ತದೆ. ಕಪ್ಪೆ ಮುಂತಾದ ಪ್ರಾಣಿಗಳಲ್ಲಿ ಹೊರಚರ್ಮ ಬೇರ್ಪಟ್ಟು ಒಳಚರ್ಮ ಮತ್ತು ನಡುಚರ್ಮಗಳು ಕೆಲವು ಕಾಲ ತಾತ್ಕಾಲಿಕವಾಗಿ ಸಹಯೋಗಿಗಳಾಗಿ ಮಧ್ಯ ಒಳಚರ್ಮದಂತೆ ಇರುವುದರಿಂದ ಈ ರೀತಿಯ ಇಪ್ಪ ದರದ ಹಂತ ಕಾಣಿಸಿಕೊಳ್ಳುತ್ತದೆ. ಇಂಥ ಸಂದರ್ಭಗಳಲ್ಲಿ ಒಳಚರ್ಮ ಅಥವಾ ಹೊರಚರ್ಮಗಳ ಜೊತೆಗೆ ಹೊಂದಿಕೊಂಡಿದ್ದ ನಡುಚರ್ಮ ತತ್‍ಕ್ಷಣ ಬೇರ್ಪಡುತ್ತದೆ.

	ಗ್ಯಾಸ್ಟ್ರುಲೀಕರಣ ಸುಸಂಘಟಿತವಾದ ಕ್ರಿಯೆ. ಬ್ಲಾಸ್ಟುಲದ ಮತ್ತು ಆದಿಗ್ಯಾಸ್ಟ್ರುಲದ ವಿವಿಧ ಸಂಭಾವ್ಯ ಅಂಗ ನಿರ್ಮಾಣಕ ಪ್ರದೇಶಗಳಲ್ಲಿ ಹುದುಗಿರುವ ವಿಶೇಷ ಭೌತರಸಾಯನಿಕ ಪರಿಸ್ಥಿತಿಗಳಾದ ಒಳಗಿನ ಶಕ್ತಿಗಳು ಈ ಕ್ರಿಯೆಯನ್ನು ನಿರ್ವಹಿಸುತ್ತವೆ.

	ಗ್ಯಾಸ್ಟ್ರುಲೀಕರಣದಲ್ಲಿ ಜೀವಕೋಶಗಳ ಸಂರಚನಾ ಚಲನೆಗಳು, ಸಂಘಟನಾ ಕೇಂದ್ರ, ಅದರ ಸಂಘಟನಾ ಪ್ರಭಾವಗಳು ಮತ್ತು ರಾಸಾಯನಿಕ ವಿಭೇದೀಕರಣಗಳೆಂದ ಉಪಚಟುವಟಿಕೆಗಳು ಸೇರಿವೆ. ಒಂದು ನಿರ್ದಿಷ್ಟರೂಪವನ್ನು ಅಥವಾ ರಚನೆಯನ್ನು ಸ್ಥಾಪಿಸಲು ಭ್ರೂಣದ ಒಳಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಡೆಯುವ ಕೋಶ ಚಲನೆಯೇ ಸಂರಚನಾ ಚಲನೆ. ಬೆಳೆವಣಿಗೆಯ ಕಾಲದಲ್ಲಿ ಅಂಗರಚನೆಯ ಎಲ್ಲ ಪ್ರದೇಶಗಳಿಗೂ ತಮ್ಮ ಭವಿಷ್ಯ ವಿಧಿಯನ್ನು ಗಳಿಸಿ ರೂಪುಗೊಳ್ಳುವ ಸಾಮಥ್ರ್ಯ ಇಲ್ಲ, ಇಂಥ ಅಸಮರ್ಥ ಪ್ರದೇಶಗಳು ಈ ಸಾಮಥ್ರ್ಯ ಇರುವ ನೆರೆಯ ಪ್ರದೇಶಗಳ ಪ್ರಭಾವವನ್ನು ಅವಲಂಬಿಸಿ ಬೆಳೆಯುತ್ತವೆ. ಈ ರೀತಿ ನೆರೆಯ ಪ್ರದೇಶಗಳ ಮೇಲೆ ಪ್ರಭಾವ ಬೀರಿ ಬೆಳವಣಿಗೆ ನೆರವಾಗುವ ಅನೇಕ ಕೇಂದ್ರಗಳನ್ನು ಕಶೇರುಕ ಭ್ರೂಣಗಳಲ್ಲಿ ನೋಡಬಹುದು. ಇವೇ ಸಂಘಟನಾ ಕೇಂದ್ರಗಳು. ಬೆಳೆವಣಿಗೆಯ ಮೊದಲ ಹಂತಗಳಲ್ಲಿ ಸರಳವಾಗಿದ್ದ ಮತ್ತು ಏಕರೂಪಿಗಳಾಗಿದ್ದ ಜೀವಕೋಶಗಳು ಕ್ರಮೇಣ ವಿವಿಧ ಅಂಗಪ್ರದೇಶಗಳಿಗೆ ಹರಡಿ ಪರಸ್ಪರ ಪ್ರಭಾವಗಳಿಗೆ ಒಳಗಾಗಿ ರಾಸಾಯನಿಕವಾಗಿ ಬೇರ್ಪಟ್ಟು ವಿಭೇದೀಕರಣಕ್ಕೆ (ಡಿಫರೆನ್ಷಿಯೇಷನ್) ಪಕ್ಕಾಗುವುವು.

	ಜೀವಕೋಶಗಳ ಸಂರಚನೀಯ ಚಲನೆಗಳಿಗೆ ಬ್ಲಾಸ್ಟೊಸೀಲ್ ಸ್ಥಳವನ್ನು ಒದಗಿಸುತ್ತದೆ. ಗ್ಯಾಸ್ಟ್ರುಲೀಕರಣದ ಅನಂತರದ ಗುರುತಿಸಬಹುದಾದ ಬೆಳೆವಣಿಗೆಯ ಮುಂದಿನ ಹಂತ ಎಂದರೆ ನರಕೊಳವೆಯ ರಚನೆ. ಕಶೇರುಕ ಭ್ರೂಣಗಳಲ್ಲಿ ಮೊತ್ತಮೊದಲು ರೂಪುಗೊಳ್ಳುವ ಅಂಗಸಮೂಹ ಎಂದರೆ ನರಮಂಡಲ. ಇದು ಮೊದಲು ಸ್ಪೈನಲ್ ನರಹುರಿಯಾಗಿ ರೂಪುಗೊಳ್ಳುತ್ತದೆ. ಆದ್ದರಿಂದ ನರಕೊಳವೆ ರೂಪುಗೊಳ್ಳುವ ಹಂತಕ್ಕೆ ನ್ಯೂರುಲೀಕರಣ ಎಂದು ಹೆಸರು. ತರುವಾಯ ಉಳಿದ ಅಂಗಸಮೂಹಗಳು ನಳಿಕೆಗಳ ರೂಪದಲ್ಲಿ ಗೋಚರಿಸುವುದರಿಂದ ಈ ಹಂತವನ್ನು ನಳಿಕಾಕರಣ ಎಂದು ಕೂಡ ಕರೆಯುವುದುಂಟು. ಅನಂತರ ಈ ನಳಿಕೆಗಳು ವಿವಿಧ ಅಂಗಗಳಾಗಿ ರೂಪುಗೊಂಡು ಪ್ರಬುದ್ಧ ಪ್ರಾಣಿಯ ರೂಪುರೇಖೆಗಳಿಗೆ ಅನುವಾಗಿ ಮಾರ್ಪಡುತ್ತವೆ. ಈ ಹಂತಗಳೇ ಅನುಕ್ರಮವಾಗಿ ಅಂಗೋತ್ಪತ್ತಿ (ಅರ್ಗೆನೋಜೆನೆಸಿಸ್) ಹಾಗೂ ಕೋಶವಿಭೇದೀಕರಣ (ಹಿಸ್ಟೋಜೆನಿಸಿಸ್).

	ಚಾರಿತ್ರಿಕ ಹಿನ್ನೆಲೆ: ಅನಾದಿಕಾಲದಿಂದಲೂ ಪ್ರಾಣಿಗಳ ಬೆಳೆವಣಿಗೆಯ ವಿಷಯ ಅಷ್ಟಿಷ್ಟು ಸಂಗ್ರಹವಾಗಿತ್ತು. ಕ್ರಿ.ಪೂ.340ರಷ್ಟು ಹಿಂದೆಯೇ ಕೋಳಿ ಮೊಟ್ಟೆಯ ಬೆಳೆವಣಿಗೆಯನ್ನು ಅರಿಸ್ಟಾಟಲ್ ವಿವರಿಸಿದ್ದ. 17 ಮತ್ತು 18ನೆಯ ಶತಮಾನಗಳಲ್ಲಿ ಅನೇಕ ಕಶೇರು ಪ್ರಾಣಿಗಳ ಮತ್ತು ಕೀಟಗಳ ಅಭ್ಯಾಸ ನಡೆಯಿತು. ಅದಾಗ್ಯೂ, ಅಲ್ಲಿಯವರೆಗಿನ ಅಧ್ಯಯನಗಳನ್ನು ಕ್ರಮಬದ್ಧವಾಗಿ ಸಂಘಟಿಸಿ ಸಮನ್ವಯ ದೃಷ್ಟಿಯನ್ನು ಒದಗಿಸದವ ಕಾರ್ಲ್ ಅರ್ನೆಸ್ಟ್‍ಫಾನ್ ಬೇಯರ್. ಅಂದು ಪ್ರಚಲಿತವಿದ್ದ, ದತ್ತಾಂಶಗಳನ್ನು ಸಂಗ್ರಹಿಸಿದುದೊಂದೇ ಅಲ್ಲದೆ ಬೇಯರ್ ಸ್ವತಃ ತನ್ನ ಮೂಲ ಅನ್ವೇಷಣೆಗಳಿಂದ ಭ್ರೂಣವಿe್ಞÁನ ಅಭ್ಯಾಸದ ಬೆಳೆವಣಿಗೆಗೆ ಹೊಸ ಅಂಶಗಳನ್ನು ಒದಗಿಸಿದ. ಆತನ ಕೊಡುಗೆಗಳಲ್ಲಿ ಅತಿಮುಖ್ಯವಾದ್ದು ಬೇಯರ್ ನಿಯಮಗಳು. ಈತನಿಗಿಂತ ಹಿಂದೆ ವಿವಿಧ ಪ್ರಾಣಿಗಳ ಬೆಳೆವಣಿಗೆಯನ್ನು ಪರಸ್ಪರ ಹೋಲಿಸಿ ತೌಲನಿಕವಾಗಿ ಪರೀಕ್ಷಿಸಿ ಹೆಕೆಲ್ ಎಂಬಾತ ಜೀವೋತ್ಪತ್ತಿ ನಿಯಮವನ್ನು (ಬಯೊಜೆನೆಟಿಕ್ ಲಾ) ವಿವರಿಸಿದ್ದ. ಈ ನಿಯಮದ ಪ್ರಕಾರ ಒಂದು ಪ್ರಾಣಿ ತನ್ನ ಬೆಳವಣಿಗೆಯ ಕಾಲದಲ್ಲಿ ತಾನು ವಿಕಾಸದ ಹಾದಿಯಲ್ಲಿ ಹಾದುಬಂದ ಅವಸ್ಥೆಗಳ ಮೂಲಕ ಬೆಳೆಯುತ್ತದೆ. ಬೇಯರ್ ಇದನ್ನು ಪುನರ್‍ಪರಿಶೀಲಿಸಿ, ತನ್ನ ಸ್ವಂತ ಸಂಶೋಧನೆಗಳಿಂದ ಪರೀಕ್ಷಿಸಿ ಹೆಕೆಲ್ ಸೂಚಿಸಿದ ನಿಯಮಕ್ಕೆ ಹೊಸರೂಪವನ್ನು ಕೊಟ್ಟ. ಇದರ ಪ್ರಕಾರ ಒಂದು ಪ್ರಾಣಿ ಗುಂಪಿನ ವಿವಿಧ ಸದಸ್ಯರುಗಳ ಉಭಯ ಸಾಮಾನ್ಯ ಲಕ್ಷಣಗಳು. ಆ ಗುಂಪಿನ ವಿವಿಧ ಪ್ರಾಣಿಗಳ ವಿಶೇಷ ಲಕ್ಷಣಗಳು ಗೋಚರಿಸುವ ಮೊದಲು ಕಾಣಿಸಿಕೊಳ್ಳುತ್ತವೆ. ಎಲ್ಲ ಕಶೇರುಕ ಪ್ರಾಣಿಗಳ ಸಾಮಾನ್ಯಲಕ್ಷಣಗಳು (ಮಿದುಳು, ನರಹುರಿ, ನೋಟೊಕಾರ್ಡ್ ರೂಪದ ಅಕ್ಷೀಯ ಕಂಕಾಲ, ಖಂಡ ಸ್ನಾಯುಗಳು, ಅಪಧಮನಿ ಕಮಾನು ಮುಂತಾದುವು) ಕಶೇರುಕಗಳ ವಿವಿಧವರ್ಗಗಳ ವಿಶಿಷ್ಟ ಲಕ್ಷಣಗಳಿಗೂ ಮುನ್ನವೇ (ಚತುಷ್ಟಾದಿಗಳ ಕಾಲುಗಳು, ಸ್ತನಿಗಳ ರೋಮ, ಪಕ್ಷಿಗಳ ಪುಕ್ಕ ಇತ್ಯಾದಿ) ಗೋಚರಿಸುವುವು. ಕುಟುಂಬ, ಜಾತಿ ಮತ್ತು ಪ್ರಭೇದಗಳ ಗುರುತಿನ ಲಕ್ಷಣಗಳು ಬೆಳೆವಣಿಗೆಯ ಕೊನೆಯ ಹಂತದಲ್ಲಿ ಕಾಣಿಸಿಕೊಳ್ಳುತ್ತವೆ, ಆದ್ದರಿಂದ ಭ್ರೂಣ ತನ್ನ ಮೊದಲ ಹಂತದಲ್ಲಿ ಪ್ರಾಣಿರಾಜ್ಯದ ಎಲ್ಲ ಪ್ರಾಣಿಗಳಿಗೂ ಉಭಯಸಾಮಾನ್ಯವಾದ ರಚನೆಯನ್ನು ಪಡೆದಿರುತ್ತದೆ ಮತ್ತು ಆ ನಿರ್ದಿಷ್ಟ ಗುಂಪಿನ ಸಂಘಟನೆಯ ಮೂಲಮಾದರಿಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಬಹುದು. ಬಹುಪಾಲು ಜೀವವಿe್ಞÁನಿಗಳು ಜೀವವಿಕಾಸವಾದವನ್ನು ಒಪ್ಪಿಕೊಳ್ಳದಿದ್ದ ಕಾಲದಲ್ಲಿ ಬೇಯರ್ ತನ್ನ ನಿಯಮಗಳನ್ನು ಪ್ರತಿಪಾದಿಸಿದನಾದರೂ ಜೀವವಿಕಾಸವಾದದ ಬೆಳಕಿನಲ್ಲಿ ಈ ನಿಯಮವನ್ನು ಪುನರ್‍ಪತ್ರಿಪಾದಿಸಬಹುದೆಂಬ ಅಂಶವನ್ನು ಅರಿತಿದ್ದ. ಈ ಹೊಸ ವಿವರಣೆಯ ವಾದಕ್ಕೆ ಮುಲ್ಲರ್-ಹೆಕೆಲ್‍ರ ಜೀವೋತ್ಪತ್ತಿ ನಿಯಮ ಎಂಬ ಹೆಸರು ಬಂದಿದೆ. ಈ ನಿಯಮವನ್ನು ಪ್ರತಿಪಾದಿಸಿದ ಅನಂತರ ಪ್ರಾಣಿರಾಜ್ಯದ ಪ್ರಧಾನ ಗುಂಪುಗಳಿಗೆ ಸೇರಿದ ಪ್ರಾಣಿಗಳ ಬೆಳೆವಣಿಗೆಯನ್ನು ಭ್ರೂಣ ವಿe್ಞÁನಿಗಳು ಅಭ್ಯಸಿಸಿದ್ದಾರೆ. ಈ ಸಂಶೋಧನೆಗಳ ಫಲವಾಗಿ ಒಂದು ಪ್ರಾಣಿಯ ಬೆಳವಣಿಗೆಯನ್ನು ಇನ್ನೊಂದು ಪ್ರಾಣಿಯ ಬೆಳೆವಣಿಗೆಯೊಂದಿಗೆ ಹೋಲಿಸುವುದು ಸಾಧ್ಯವಾಗಿ ತೌಲನಿಕ ಭ್ರೂಣವಿe್ಞÁನ ಅನುಷ್ಠಾನಕ್ಕೆ ಬಂದಿದೆ. ಇಷ್ಟಾದರೂ, ಪ್ರಾಣಿಗಳ ಬೆಳೆವಣಿಗೆಯಲ್ಲಿ ಕಂಡುಬರುವ ಪೂರ್ವೈತಿಹಾಸಿಕ ಬದಲಾವಣೆಗಳ ಅಸ್ತಿತ್ವದ ಪ್ರಶ್ನೆ ಹಾಗೆಯೇ ಉಳಿಯಿತು. ಈ ಮೂಲಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯತ್ನ ಬೆಳೆವಣಿಗೆಯ ಅಸ್ತಿತ್ವವನ್ನು ಗುರುತಿಸಿದಂದಿನಿಂದಲೂ ನಡೆದುಬಂದಿದೆ. ಬಹಳಕಾಲದವರೆಗೆ ಊಹೆಯ ಆಧಾರದ ಮೇಲೆ ಇದಕ್ಕೆ ವಿವರಣೆಯನ್ನು ಕೊಡುವ ಪ್ರಯತ್ನಗಳು ನಡೆದವು. ಅರಿಸ್ಟಾಟಲ್ ಕೂಡ ತರ್ಕಬದ್ಧವಾದ ವಿವರಣೆಯನ್ನು ಕೊಡುವ ಪ್ರಯತ್ನ ಮಾಡಿದ. ವಿe್ಞÁನ ಸ್ವಲ್ಪಮಟ್ಟಿಗೆ ಪ್ರಗತಿ ಸಾಧಿಸಿದ 17 ಮತ್ತು 18ನೆಯ ಶತಮಾನಗಳಲ್ಲಿ ಬೆಳೆವಣಿಗೆಯನ್ನು ವಿವರಿಸುವ ಪೂರ್ವನಿರ್ಮಾಣ ಸಿದ್ಧಾಂತ (ತಿಯೊರಿ ಆಫ್ ಪ್ರೀಫಾರ್ಮೆಷನ್) ಎಂಬುದು ಪ್ರಚಲಿತವಿತ್ತು. ಅಂದಿನ ಭ್ರೂಣ ವಿe್ಞÁನಿಗಳು ಅದೇತಾನೇ ಬಳಕೆಗೆ ಬರುತ್ತಿದ್ದ ಸೂಕ್ಷ್ಮದರ್ಶಕದ ಸಹಾಯದಿಂದ ಲಿಂಗಾಣುಗಳನ್ನು ಪರೀಕ್ಷಿಸಿ ಅವುಗಳಲ್ಲಿ ಪೂರ್ವನಿರ್ಮಿತ ಪ್ರಬುದ್ಧ ಪ್ರಾಣಿಯ ಸೂಕ್ಷ್ಮ ಆಕಾರವನ್ನು ಕಂಡೆವೆಂದು ಭಾವಿಸಿದರು ಮತ್ತು ಈ ಭಾವನೆಯ ಆಧಾರದಮೇಲೆ ಬೆಳೆವಣಿಗೆಯನ್ನು ವಿವರಿಸುವ ಪ್ರಯತ್ನವನ್ನು ಮಾಡಿದರು. ಈ ವಾದದ ಪ್ರಕಾರ ಒಂದು ಲಿಂಗಾಣುವಿನಲ್ಲಿ ಪೂರ್ವ ನಿರ್ಮಿತವಾದ ಪ್ರಬುದ್ಧರೂಪ ಇರುತ್ತದೆ ಮತ್ತು ಬೆಳೆವಣಿಗೆಯ ಕಾಲದಲ್ಲಿ ಇದು ಪೋಷಿಸಲ್ಪಟ್ಟು ಗಾತ್ರದಲ್ಲಿ ಬೆಳೆಯುತ್ತದೆ. ತಮ್ಮ ನಂಬಿಕೆಗಳನ್ನುನುಸರಿಸಿ ಪೂರ್ವನಿರ್ಮಿತ ಆಕಾರಗಳನ್ನು ಗಂಡು ಅಥವಾ ಹೆಣ್ಣು ಲಿಂಗಾಣುಗಳಲ್ಲಿ ಕಂಡುದಾಗಿ ಭಾವಿಸಿದರು. ಇವಕ್ಕೆ ಅನುಕ್ರಮವಾಗಿ ಹೋಮನ್‍ಕ್ಯುಲಸ್ ಮತ್ತು ಓವನ್‍ಕ್ಯುಲಸ್ ಎಂದುಹೆಸರಿಟ್ಟರು. ಅಂದಿನ ಕಾಲಕ್ಕೆ ಪೂರ್ವನಿರ್ಮಾಣ ಸಿದ್ಧಾಂತ ಹೆಚ್ಚು ಜನಪ್ರಿಯವಾಗಿದ್ದರೂ ಇದು ತೃಪ್ತಿಕರವಾದ ವೈe್ಞÁನಿಕ ಉತ್ತರವನ್ನು ಕೊಡಲಾರದೆ ಹೋಯಿತು. ಈ ವಾದವನ್ನು ವಿರೋಧಿಸಿದವರಲ್ಲಿ ಮುಖ್ಯನಾದವ ಕ್ಯಾಸ್ಟರ್ ಫ್ರೆಡ್ರಿಕ್ ವುಲ್ಟ್. ಈತ 1759ರಲ್ಲಿ ಅಧಿಜನನ (ಎಪಿಜನಿಸಿಸ್) ಸಿದ್ಧಾಂತವನ್ನು ಪ್ರತಿಪಾದಿಸಿದ. ಕೋಳಿಯ ಬೆಳೆವಣಿಗೆಯನ್ನು ಸ್ವತಃ ವೀಕ್ಷಿಸಿದ ಈತ ಬೆಳೆವಣಿಗೆಯ ಮೊದಲ ಹಂತಗಳಲ್ಲಿ ಭ್ರೂಣದ ಯಾವ ಭಾಗವೂ ಗೋಚರಿಸದು, ಮೊದಲು ಸರಳವಾಗಿ ಆರಂಭಗೊಂಡು ಕ್ರಮೇಣ ಜಟಿಲತೆಯ ಕಡೆಗೆ ನಡೆದು ಭ್ರೂಣ ಕಾಣಿಸಿಕೊಂಡು ಬೆಳೆವಣಿಗೆ ಮುಂದುವರಿಯುತ್ತದೆ ಎಂದು ಹೇಳಿದ. ಪೂರ್ವನಿರ್ಮಾಣ ಅಥವಾ ಅಧಿಜನನ ಈ ಪರ್ಯಾಯ ದೃಷ್ಟಿಕೋನಗಳ ನಡುವೆ ವಾದ ವಿವಾದಗಳು ನಡೆದರೂ, ಇದರಲ್ಲಿ ಯಾವುದು ಸರಿ ಎಂಬುದನ್ನು ನಿರ್ಧರಿಸುವುದು ಅಂದಿನ ಪರಿಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ ಬೆಲೆವಣಿಗೆಯ ಕಾಲದಲ್ಲಿ ಕಾಣುವ ಸಂರಚನೀಯ ವ್ಯತ್ಯಾಸಗಳನ್ನು ಪಟ್ಟಿಮಾಡಿ ಒಂದು ಪ್ರಾಣಿಯ ಬೆಳೆವಣಿಗೆಯನ್ನು ಇನ್ನೊಂದರ ಬೆಳವಣಿಗೆಯೊಡನೆ ಹೋಲಿಸಿ ಒಂದು ಸಮನ್ವಯ ಸೂತ್ರವನ್ನು ರೂಪಿಸತೊಡಗಿದ್ದ ಭ್ರೂಣವಿe್ಞÁನಿಗಳಲ್ಲಿ ಕೆಲವರು ಇದು ಏಕೆ ಮತ್ತು ಹೇಗೆ ? ಎಂಬ ಪ್ರಶ್ನೆಗಳನ್ನು ಕೇಳತೊಡಗಿದರು. ಅಂದು ಚಾಲ್ತಿಯಲ್ಲಿದ್ದ ಈ ವಾದಗಳನ್ನು ಪ್ರಯೋಗಗಳಿಂದ ಪರೀಕ್ಷಿಸಲು ಮುಂದಾದರು. ಪೂರ್ವನಿರ್ಮಾಣ ಸಿದ್ದಾಂತ ನಿಜವಾದರೆ ಮೊದಲ ವಿದಲನದ ಅನಂತರ ಉತ್ಪತ್ತಿಯಾಗುವ ಎರಡು ಕೋಶಗಳ ನಡುವೆ ಅಂಡದಲ್ಲಿರುವ ಭ್ರೂಣವಸ್ತು ಹಂಚಿಹೋಗಿರಬೇಕು, ಇದರಲ್ಲಿ ಒಂದು ಕೋಶವನ್ನು ನಾಶಪಡಿಸಿದರೆ, ಇನ್ನೊಂದು ಕೋಶ (ಕೇವಲ ಅರ್ಧದಷ್ಟು ಭ್ರೂಣವಸ್ತು ಇರುವುದರಿಂದ) ಅರ್ಧಭ್ರೂಣವಾಗಿ ಬೆಳೆಯಬೇಕು. ಈ ದಿಸೆಯಲ್ಲಿ ಮೊದಲ ಪ್ರಯೋಗ ನಡೆಸಿದನೆಂದರೆ ವಿಲ್‍ಹೆಲ್ಮ್ ರೂಕ್ಸ್. ಈತ ಕಪ್ಪೆಯ ದ್ವಿಕೋಶ ಹಂತದ ಅಂಡದಲ್ಲಿ ಒಂದು ಕೋಶವನ್ನು ಕಾದಸೂಜಿಯಿಂದ ಕೊಂದು ಇನ್ನೊಂದು ಕೋಶವನ್ನು ಬೆಳೆಸಿದ. ಇದು ಅರ್ಧಭ್ರೂಣವಾಗಿ ಬೆಳೆಯಿತು. ಇದರಿಂದ ಉತ್ತೇಜಿತನಾದ ರೂಕ್ಸ್ ಪೂರ್ವನಿರ್ಮಾಣ ಸಿದ್ಧಾಂತಕ್ಕೆ ಹೊಸರೂಪಕೊಟ್ಟು ಶಬಲ ಬೆಳೆವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದ; ತತ್ತಿಯಲ್ಲಿ ಭವಿಷ್ಯ ಭ್ರೂಣದ ವಿವಿಧ ಅಂಗಾಂಗಗಳಾಗಿ ಬೆಳೆಯಲು ಪೂರ್ವನಿರ್ಧಾರಿತವಾದ ಭಾಗಗಳಿರುತ್ತವೆ ಮತ್ತು ಈ ಭಾಗಗಳಿಗೆ ಆಕಸ್ಮಿಕ ಹಾನಿಯಾದರೆ ಅದರಿಂದ ಬೆಳೆಯುವ ಭ್ರೂಣದಲ್ಲಿ ಕೂಡ ಹಾನಿ ಕಾಣಿಸಿಕೊಳ್ಳುತ್ತದೆ ಎಂಬುದು ಈತನ ಅಭಿಪ್ರಾಯ. ಆದರೆ ಕೆಲವು ವರ್ಷಗಳ ಅನಂತರ ಇದೇ ಪ್ರಯೋಗವನ್ನು ರೂಕ್ಸನ ವಿದ್ಯಾರ್ಥಿ ಹ್ಯಾನ್ಸ್ ಡ್ರಿಶ್ ಎಂಬಾತ ಸೀ ಅರ್ಚಿನ್ ಅಂಡಗಳಲ್ಲಿ ನಡೆಸಿ ರೂಕ್ಸನ ಸಿದ್ಧಾಂತ ತಪ್ಪು ಎನ್ನುವುದನ್ನು ತೋರಿಸಿಕೊಟ್ಟ. ಈತನ ಅನುಸರಿಸಿದ ವಿಧಾನ ಭಿನ್ನವಾಗಿತ್ತು. ದ್ವಿಕೋಶ ಹಂತದ ಭ್ರೂಣದ ಎರಡು ಕೋಶಗಳನ್ನೂ ಕತ್ತರಿಸಿ, ಬೇರ್ಪಡಿಸಿ ಬೇರೆ ಬೇರೆಯಾಗಿ ಬೆಳೆಸಿ ಅವು ಎರಡು ಪೂರ್ಣ ಭ್ರೂಣಗಳಾಗಿ ಬೆಳೆಯುತ್ತವೆ ಎನ್ನುವುದನ್ನು ಈತ ತೋರಿಸಿಕೊಟ್ಟ. ರೂಕ್ಸ್‍ನ ಪ್ರಯೋಗದಲ್ಲಿ ತಪ್ಪು ಇದ್ದುದರಿಂದ ಫಲಿತಾಂಶವೂ ತಪ್ಪಾಗಿ ತಪ್ಪು ಅಭಿಪ್ರಾಯಕ್ಕೆ ಎಡೆಕೊಟ್ಟಿತು. ಸುಡುವ ಸೂಜಿಯಿಂದ ನಾಶಪಡಿಸಿದ ಒಂದು ಜೀವಕೋಶ ಅಂಡದಲ್ಲೇ ಉಳಿದುಕೊಂಡು ಇನ್ನೊಂದು ಕೋಶದ ಬೆಳೆವಣಿಗೆಯನ್ನು ಪ್ರತಿಬಂಧಿಸಿ ಈ ಅಸಾಮಾನ್ಯ ಬೆಳೆವಣಿಗೆಗೆ ಕಾರಣವಾಯಿತು ಎನ್ನುವುದನ್ನು ಡ್ರಿಶ್ ಕಂಡುಕೊಂಡ. ಈತನ ಅನಂತರ ಅನೇಕರು ಕಪ್ಪೆಯ ಅಂಡಗಳನ್ನೇ ಬಳಸಿ ಇದೇ ಅಭಿಪ್ರಾಯಕ್ಕೆ ಬಂದರು. ಹೀಗೆ ಪ್ರಾಯೋಗಿಕ ಭ್ರೂಣವಿe್ಞÁನ ಅನುಷ್ಠಾನಕ್ಕೆ ಬಂದಿತು. ಕೇವಲ ಬೆಳೆವಣಿಗೆಯ ಹಂತಗಳಿಂದ ಅನುಕ್ರಮವಾಗಿ ಪಟ್ಟಿಮಾಡದೆ, ಅವನ್ನು ಒಂದರೊಡನೊಂದು ಹೋಲಿಸಿ ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಗುರುತಿಸುವ ಮಾತ್ರದಿಂದಲೇ ತೃಪ್ತಿಪಡದೆ ಬೆಳವಣಿಗೆಯ ಅಂತರಂಗದ ಅಂಶವನ್ನು ಕಾಣುವ ಪ್ರಯೋಗಗಳು ನಡೆದುವು. 19ನೆಯ ಶತಮಾನದ ಅಂತ್ಯದಲ್ಲಿ ಮತ್ತು 20ನೆಯ ಶತಮಾನದ ಆದಿಯಲ್ಲಿ ಆರಂಭವಾದ ಈ ಅಭ್ಯಾಸಗಳು ವಿಪುಲವಾಗಿ ನಡೆದು ಭ್ರೂಣವಿe್ಞÁನದ ದೊಡ್ಡದಾಗಿ ಬೆಳೆಯಲು ಕಾರಣವಾಗಿವೆ.

	ವಿವರಣಾತ್ಮಕ ಭ್ರೂಣವಿe್ಞÁನದಲ್ಲಿದ್ದ ಆಸಕ್ತಿ ಪ್ರಾಯೋಗಿಕ ಭ್ರೂಣವಿe್ಞÁನದ ಕಡೆಗೆ ತಿರುಗಿದಂತೆ ಅಕಶೇರುಕ ಮತ್ತು ಕಶೇರುಕ ಭ್ರೂಣವಿe್ಞÁನಗಳ ನಡುವೆ ಇದ್ದ ಹಳೆಯ ಭಿನ್ನ ಭೇದಗಳು ಮರೆಯಾಗಿವೆಯಾದರೂ ಅಕಶೇರುಕಗಳ ಬೆಳೆವಣಿಗೆಯ ಅಭ್ಯಾಸ ಕೆಲವು ವಿಶಿಷ್ಟ ಲಕ್ಷಣಗಳನ್ನು ಪರಿಚಯಮಾಡಿಕೊಟ್ಟು ಭ್ರೂಣವಿe್ಞÁನದ ಹಲವಾರು ಕ್ಲಿಷ್ಟ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಭ್ರೂಣದ ಬೆಳೆವಣಿಗೆಯ ರೀತಿಗೂ ಭ್ರೂಣದ ಪರಿಸರಕ್ಕೂ ನಿಕಟ ಸಂಬಂಧವಿದೆ. ಕೇವಲ ವಯಸ್ಕ ಪ್ರಾಣಿಗಳು ಮಾತ್ರವಲ್ಲದೆ ಅವುಗಳ ಭ್ರೂಣ ಮತ್ತು ಡಿಂಬಗಳು ಕೂಡ ತಮ್ಮ ಪರಿಸರಕ್ಕೆ ಹೊಂದಿಕೊಂಡಿರಬೇಕಾಗುತ್ತದೆ. ಆದರೆ ಒಂದು ಪ್ರಾಣಿ ತಾನು ವಯಸ್ಕ ಸ್ಥಿತಿಯಲ್ಲಿ ಬದುಕುಳಿಯಲಾರದ ಪರಿಸರದಲ್ಲಿ ಮೊಟ್ಟೆಯನ್ನಿಡುವುದಾದರೆ ಹೊರಬರುವ ಮರಿ ಅಥವಾ ಡಿಂಬ ಆ ನಿರ್ದಿಷ್ಟ ಪರಿಸರಕ್ಕೆ ಹೊಂದಿಕೊಂಡು ಬೆಳೆಯುವ ಸಾಮಥ್ರ್ಯಗಳಿಸಿಕೊಳ್ಳುತ್ತದೆ. ಇಂಥ ಡಿಂಬದಿಂದ ಪ್ರಬುದ್ಧ ಪ್ರಾಣಿ ಬೆಳೆದು ತನ್ನ ಸಹಜನೆಲೆಯಲ್ಲಿ ಜೀವನ ನಡೆಸುವಂತಾಗುವ ಮುನ್ನ ಡಿಂಬದ ರೂಪಪರಿವರ್ತನೆ ಆಗಬೇಕಾಗುತ್ತದೆ. ಕೆಲವು ಸಾರಿ ಭ್ರೂಣ ಪ್ರಬುದ್ಧಾವಸ್ಥೆಯನ್ನು ತಲುಪಲು ಅದು ಅನೇಕ ಲಾರ್ವ ಹಂತಗಳ ಮೂಲಕ ಹಾದು ಬೆಳೆಯಬೇಕಾಗುತ್ತದೆ. ಇಲ್ಲಿ ಹೊಂದಾಣಿಕೆಯ ಸಂಬಂಧ ಇರುವುದನ್ನು ಕಾಣಬಹುದು.

	ವಿವಿಧ ಅಕಶೇರುಕಗಳಲ್ಲಿ ಅನೇಕ ರೀತಿಯ ಡಿಂಬಗಳುಂಟು. ಮೊದಲ ನೋಟಕ್ಕೆ ಇವು ತೀರ ಭಿನ್ನ ಎಂದು ಕಂಡುಬಂದರೂ ಇವುಗಳ ರೂಪಪರಿವರ್ತನೆಯಲ್ಲಿ ಏಕರೂಪತೆಯನ್ನು ಕಾಣಬಹುದು. ಬಹುಪಾಲು ಪ್ರಾಣಿಗಳು ಕಡಲ ನೀರಿನಲ್ಲಿ ಅಥವಾ ಸಿಹಿನೀರಿನಲ್ಲಿ ಅಥವಾ ಮೊಟ್ಟೆಯೊಳಗಿನ ದ್ರವಮಾಧ್ಯಮದಲ್ಲಿ ಬೆಳೆಯುತ್ತವೆ. ಒಟ್ಟಿನಲ್ಲಿ ಇವುಗಳ ಬೆಳೆವಣಿಗೆಗೆ ದ್ರವಮಾಧ್ಯಮ ಅಗತ್ಯ. ಏಕೆಂದರೆ ಭ್ರೂಣದ ವಿವಿಧ ಭಾಗಗಳಿಗೆ ಅಗತ್ಯವಾಗುವ ಶಕ್ತಿಯನ್ನು ಪೋಷಕಾಂಶಗಳನ್ನು ಒದಗಿಸುವ ಅನಿಲಗಳು ಮತ್ತು ಲವಣಗಳು ದ್ರವರೂಪದಲ್ಲಿ ಅಭಿಸರಣ ಕ್ರಿಯೆಯ ಮೂಲಕ ಮಾತ್ರ ಪಸರಿಸಲು ಸಾಧ್ಯ. ಅಕಶೇರುಗಳ ಆದಿಮ ಮಾದರಿಯ ಡಿಂಬ ಸರಳ ಗ್ಯಾಸ್ಟ್ರುಲಾವಸ್ಥೆಯಿಂದ ಆವತರಿಸಬಹುದಾದ ಶಿಲಿಕಾಂಗಧಾರಿ ಈಜುವ ಡಿಂಬ. ಡಿಂಬದ ರೂಪ ಪರಿವರ್ತನೆಯಲ್ಲಿ ನಿರ್ದಿಷ್ಟವಾದ ಸೂತ್ರಗಳನ್ನು ಹಾಗೂ ಪ್ರಕ್ರಿಯೆಗಳನ್ನು ಕಾಣಬಹುದು. ಎಲ್ಲ ಪ್ರಾಣಿವಂಶಗಳಲ್ಲಿಯೂ ಇವು ಕಂಡುಬರುತ್ತವೆ. ಭಿನ್ನ ಪರಿವೃದ್ಧಿ, ಭಾಗಗಳ ಕಳೆತ, ನಿರಂತರ ಏಕರೀತಿಯ ಪರಿವೃದ್ಧಿ ಹಾಗೂ ಕೋಶ ಮತ್ತು ಅಂಗಾಂಶ ವಿಭೇಧೀಕರಣಗಳು ಡಿಂಬದ ರೂಪ ಪರಿವರ್ತನೆಯಲ್ಲಿ ಕಂಡುಬರುವ ಕೆಲವು ಮುಖ್ಯ ಘಟನೆಗಳು. 

	ಮುಂದೆ ಕಾಣಿಸಿಕೊಳ್ಳುವ ಅಂಗಾಂಗಗಳ ಅದ್ಯಾಂಗಗಳು ರೂಪಗೊಳ್ಳುವ ಭಾಗದಲ್ಲಿ ಕೋಶ ವಿಭಜನೆಯ ವೇಗ ತೀವ್ರಗೊಳ್ಳುವುದೇ ಭಿನ್ನ ಪರಿವೃದ್ಧಿಯ ಲಕ್ಷಣ. ಅಂತರಾವಸ್ಥೆ ಮತ್ತು ವಿಭಜನೆಯ ಕಾಲದಲ್ಲಿ ತುಲನಾತ್ಮಕವಾಗಿ ಕೋಶಸಂಖ್ಯೆಯನ್ನು ಅಭ್ಯಸಿಸುವುದರಿಂದ ವೃದ್ಧಿಯನ್ನು ಗುರುತಿಸಬಹುದು. ವಿಭೇಧೀಕರಣಗೊಳ್ಳುತ್ತಿರುವ ಭ್ರೂಣದ ಕೋಶಗಳು ವೈಯಕ್ತಿಕ ಚಲನಸಾಮಥ್ರ್ಯ ಕಳೆದುಕೊಂಡಿಲ್ಲದಿರುವುದರಿಂದ ನೆರೆಯ ವಲಯಗಳಿಂದ ನಡೆಯುವ ಕೋಶಗಳ ವಲಸೆಯಿಂದ ವೃದ್ಧಿ ತೀವ್ರಗೊಳ್ಳಬಹುದು. ದ್ರವರೂಪದಲ್ಲಿ ಲವಣಗಳನ್ನು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವುದರ ಮೂಲಕ ಸಹ ಪರಿವೃದ್ಧಿ ತೀವ್ರಗೊಳ್ಳಬಹುದು. ಕೆಲವೊಮ್ಮೆ ಇದಕ್ಕೆ ವಿರುದ್ಧವಾಗಿ ಕೆಲವು ಪ್ರದೇಶಗಳಲ್ಲಿ ಬೆಳೆವಣಿಗೆ ಪಾಶ್ರ್ವಿಕವಾಗಿ ಅಥವಾ ಪೂರ್ಣವಾಗಿ ಸ್ಥಗಿತಗೊಳ್ಳಬಹುದು. ಈ ಎರಡೂ ಕ್ರಿಯೆಗಳು ಪರಿವೃದ್ಧಿಯ ದರವನ್ನು ನಿರ್ಧರಿಸುವ ಅಂಶಗಳು. ಸ್ವಲ್ಪಮಟ್ಟಿಗೆ ಇವಕ್ಕೂ ಇವುಗಳ ತಳಿ ವಿಧಾನಕ್ಕೂ ಸಂಬಂಧವಿದ್ದು ಈ ಕ್ರಿಯೆಗಳು ನಡೆಯುವ ಕಾಲ ಅವುಗಳ ಪ್ರಾಮುಖ್ಯವನ್ನು ನಿರ್ಧರಿಸುತ್ತದೆ. ಬೆಳೆವಣಿಗೆಯಲ್ಲಿ ಸಂಕಷ್ಟ ಕಾಲಗಳಿದ್ದು. ಆಕಾಲದಲ್ಲಿ ಮಾತ್ರ ಬೆಳೆವಣಿಗೆಯ ಬದಲಾವಣೆಗಳು ಪ್ರಭಾವ ಬೀರಬಹುದು. ಅನಂತರದ ಘಟನೆಗಳು ಇದನ್ನು ಅಲಂಬಿಸುವ ಅನೇಕ ಉದಾಹರಣೆಗಳಿವೆ. ಭಿನ್ನ ಪರಿವೃದ್ಧಿ ಪ್ರಕ್ರಿಯೆ ಅಪ್ರತ್ಯಕ್ಷ ಬೆಳೆವಣಿಗೆಯಂಥ ರೂಪರಿವರ್ತನೆಗೆ ಮಾತ್ರ ಮೀಸಲಾಗಿದೆ ಎಂಬುದೇನಿಲ್ಲ. ನೇರವಾಗಿ ಬೆಳೆಯುವ ಪ್ರಾಣಿಗಳಲ್ಲಿಯೂ ನಡೆಯಬಹುದು.

	ರೂಪಪರಿವರ್ತನೆಯ ಕಾಲಕ್ಕೆ ಅಂಗಾಂಗಗಳ ಕಳೆತ ನಡೆಯುತ್ತದೆ ಎಂದು ಸಾಮಾನ್ಯವಾಗಿ ಹೇಳಿದರೂ ಇದು ವಾಸ್ತವಕ್ಕಿಂತ ಸಾಪೇಕ್ಷಿಯವೆಂದೇ ಹೇಳಬೇಕು. ಒಂದು ಡಿಂಬದ ತತ್ಕಾಲದ ಜೀವನಕ್ಕೆ ಅಗತ್ಯವಾಗುವ ತಾತ್ಕಾಲಿಕ ಅಂಗಾಂಗಗಳು ಅದು ಪ್ರಬುದ್ಧ ಪ್ರಾಣಿಯಾಗಿ ಬೆಳೆದಾಗ ಕೆಲಸಕಾರ್ಯಗಳನ್ನು ಪೂರೈಸಲಾಗದೆ ರೂಪಪರಿವರ್ತನೆಯ ಕಾಲದಲ್ಲಿ ಕಳಚಿಕೊಂಡು ಕಳೆದುಹೋಗಬಹುದು. ಇಲ್ಲವೆ ಭಕ್ಷಾಣುಕೋಶಗಳಿಂದ ಭಕ್ಷಿಸಲ್ಪಟ್ಟು ಅಥವಾ ಕಿಣ್ವಲಯಕಗಳ ಪ್ರಭಾವಕ್ಕೆ ಸಿಕ್ಕು ಕಣ್ಮರೆಯಾಗಬಹುದು. ಕೆಲವೊಮ್ಮೆ ಈ ಅಂಗಾಂಗಗಳ ರಚನೆಯಲ್ಲಿ ಪಾತ್ರವಹಿಸುವ ಕೋಶಗಳು ನಿರ್ವಿಭೇದೀಕರಣಗೊಂಡು ಬೇರೆ ಅಂಗಾಂಗಗಳ ರಚನೆಯಲ್ಲಿ ಭಾಗವಹಿಸಬಹುದು.

	ನೇರವಾದ ಭ್ರೂಣಿಯ ಬೆಳೆವಣಿಗೆಯಲ್ಲಿಯಾಗಲಿ ರೂಪಪರಿವರ್ತನೆಯಲ್ಲಾಗಲಿ ನಿರಂತರ ಏಕರೀತಿಯ ಲಯಬದ್ಧ ಪರಿವೃದ್ಧಿಯ ಮೂಲಕ ಹೊಸ ಅದ್ಯಾಂಗಗಳು ನಿರ್ಮಾಣವಾಗುತ್ತಿರಬಹುದು. ಆಗ ಕೋಶೀಯ ಹಾಗೂ ಅಂಗಾಂಶೀಯ ವಿಭೇದೀಕರಣಗಳು ನಡೆಯುತ್ತವೆ. ಕೋಶಗಳು ಪದರಗಳಾಗುವುದು. ವಿವಿಧ ಅಂಗಾಂಶ ಪ್ರರೂಪಗಳಿಗೆ ಹೊಂದಿಕೊಳ್ಳುವ ಸಲುವಾಗಿ ಕೋಶ ಆಕಾರದ ಬದಲಾವಣೆಯಾಗುವುದು. ಕೋಶದ್ರವ್ಯದಲ್ಲಿ ಕಣಗಳು, ತಂತುಕಗಳೇ ಮುಂತಾದ ವಿಶೇಷ ರಚನೆಗಳ ನಿಕ್ಷೇಪಣ ಮುಂತಾದ ಕ್ರಿಯೆಗಳೇ ವಿಭೇದೀಕರಣದಲ್ಲಿ ಪಾಲ್ಗೊಳ್ಳುವ ಪ್ರಕ್ರಿಯೆಗಳು.

	ಹೀಗೆ ಆಧುನಿಕ ಭ್ರೂಣಶಾಸ್ತ್ರ ಶೋಧನೆಗಳು ಪ್ರಾಣಿಗಳ ರಚನಾ ಬೆಳೆವಣಿಗೆಯ ಮೇಲೆ, ಪ್ರಾಣಿಗಳು ನಿರ್ವಹಿಸುವ ವಿವಿಧ ಕ್ರಿಯೆಗಳ ಮೇಲೆ, ವರ್ಗ ಸಂಬಂಧಗಳ ಮೇಲೆ ಹಾಗೂ ವೈಯಕ್ತಿಕ ಮತ್ತು ಗುಂಪುಗಳ ನಡುವಿನ ವಂಶಸಂಬಂಧಗಳ ಮೇಲೆ ಹೊಸ ಬೆಳಕು ಚೆಲ್ಲಿವೆ. ಏಕಕೋಶೀಯ ಅಂಡ ಜಟಿಲವಾದ ಅಂಗ ಬಹುಕೋಶ ಜೀವಿಯಾಗಿ ಪರಿವರ್ತನೆಗೊಳ್ಳುವುದು ಜೀವಿಯ ಚಟುವಟಿಕೆಗಳು ಅಭಿವ್ಯಕ್ತಿಗೊಳ್ಳುವುದರ ಪ್ರತೀಕ. ಇದರ ಅಭ್ಯಾಸ ಈ ಜೀವಿಗಳ ಸ್ವಭಾವವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.			 
(ಎಚ್.ಬಿ.ಡಿ: ಎಚ್.ಎಚ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ